ಕನ್ನಡ ಲೇಖನಗಳು - Kannada Articles

Ravi Upadhya
 
"ಯುಗಾದಿಯ೦ದು ಒ೦ದು ಚಿಂತನೆ"
"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...". ಪ್ರತೀ ಯುಗಾದಿಯಂತೆ ಈ ಬಾರಿಯೂ ಅ೦ಬಿಕಾತನಯರ ಈ ಕವನದೊಂದಿಗೆ, ಸಂಪಿಗೆ ಬಾಂಧವರಿಗೆ ಹೊಸ ಹರ್ಷದ ಹರಕೆಯೊ೦ದಿಗೆ ಹೊಸ ವರ್ಷಕ್ಕೆ ಸ್ವಾಗತ ಕೋರುವಾಗ ಹೀಗೊ೦ದು ಹೊಸ ಯೋಚನೆ; ಈ ಹೊಸ ವರ್ಷದ ಆಚರಣೆ ಎಲ್ಲಿ, ಹೇಗೆ, ಯಾರು, ಯಾವ ಹಿನ್ನೆಲೆಯಲ್ಲಿ ಅರ೦ಭಿಸಿರಬಹುದು ಎಂದು. ಪ್ರಪ೦ಚದ ಎಲ್ಲೆಡೆ ಎಲ್ಲರೂ ಹೊಸ ವರ್ಷದ ಆಚರಣೆ ಮಾಡುತ್ತಾರೆ, ಆದರೆ ಯಾವ ಹಿನ್ನೆಲೆಯಲ್ಲಿ ಈ ಆಚರಣೆಗಳು ವರ್ಷದ ಯಾವ ಮಾಸದಲ್ಲಿ, ಯಾವ ದಿನದಲ್ಲಿ ಆಚರಿಸಬೇಕೆಂದು ಯಾರು ಹೇಗೆ ನಿರ್ಧರಿಸಿರಬಹುದು? ಇದಕ್ಕೆ ಏನಾದರೋ ವೈಜ್ಞಾನಿಕ ಹಿನ್ನೆಲೆ ಇದೆಯೇ, ಅಥವಾ ಇದು ಬರೀ ಅಧಿಕಾರದ, ಕುಲ ಗೌರವ, ದೇಶ ಪ್ರೇಮದ ಸಂಕೇತ ಮಾತ್ರವೇ ಎಂದು ಒ೦ದು ಜಿಜ್ಞಾಸೆ.
ಯುಗಾದಿಯ ಮೊದಲೊಂದು ಯುಗ ಚಿಂತನೆ. ನಮ್ಮಲ್ಲಿ ಸುಮಾರಷ್ಟು ಜನರಿಗೆ ಭಾರತೀಯ ವರ್ಷ ಗಣನೆ ಗೊತ್ತಿರಬಹುದು, ಆದರೆ ಅದು ಆಧುನಿಕ ವಿಜ್ಞಾನಕ್ಕೆ ಎಷ್ಟು ಹತ್ತಿರ ಎ೦ದು ಸ್ವಲ್ಪ ಈ ಬಾರಿ ವಿಚಾರಿಸೋಣ. ಭಾರತೀಯ ಪದ್ದತಿಯಲ್ಲಿ, ಕಲಿಯುಗದ ಅವಧಿ ೪೩೨ ಸಾವಿರ ಮಾನವ ವರ್ಷಗಳು. ದ್ವಾಪರ ಇದರ ಎರಡರಷ್ಟು, ಕೃತ ಮೂರರಷ್ಟು ಮತ್ತು ತ್ರೇತಾಯುಗ ನಾಲಕ್ಕರಷ್ಟು. ಅ೦ದರೆ ಒ೦ದು ಚತುರ್ಯುಗ ದ ಸಮಯ ಸುಮಾರಷ್ಟು ೪.೩ ಮಿಲಿಯ ವರ್ಷಗಳು. ಇಂಥ ೭೧ ಚತುರ್ಯುಗಗಳು ಒ೦ದು ಮನ್ವಂತರ, ಇಂಥ ೧೪ ಮನ್ವಂತರಗಳು ಒ೦ದು ಬ್ರಹ್ಮ ದಿನ. ಅ೦ದರೆ ಸುಮಾರು ೪.೫ ಬಿಲಿಯ ವರ್ಷಗಳು ಅ೦ದರೆ ಬ್ರಹ್ಮನ ಒ೦ದು ಹಗಲು. ಅಷ್ಟೇ ವರ್ಷ ಅವನ ರಾತ್ರಿ. (೧/೪ ರಷ್ಟು ರಾತ್ರಿ ಆರಂಭದಲ್ಲೂ ಮತ್ತು ೧/೪ ರಾತ್ರಿ ಅಂತ್ಯದಲ್ಲೂ ಎ೦ದು ಊಹಿಸಿಕೊಳ್ಳಬಹುದು.) ಈ ಕಾಲಗಣನೆಯ ಪ್ರಕಾರ, ನಾವೀಗ ಕಲ್ಪದ ೨ನೆಯ ಭಾಗದಲ್ಲಿದ್ದೇವೆ. (ದ್ವಿತೀಯ ಪರಾರ್ಧ). ಕುತೂಹಲಕಾರಿ ಅಂಶ ಎ೦ದರೆ, ಯು ಎಸ್ ಜಿಯೋಲೋಜಿಕಲ್ ಸರ್ವೇ ಬ್ಯೂರೋ ದವರು ರೇಡಿಯೋ ಐಸೊಟೊಪ್ ಪದ್ಧತಿಯಲ್ಲಿ ಕಾಲಗಣನೆ ಮಾಡಿ, ನಮ್ಮ ಸೂರ್ಯ ಮಂಡಲ ಸುಮಾರು ೪.೫ ಬಿಲಿಯ ವರ್ಷಗಳಷ್ಟು ಹಳೆಯದು; ಸೂರ್ಯನ ಜಲಜನಕ ಇಂಧನ ಸುಮಾರು ಅರ್ಧದಷ್ಟು ಮಿಗಿದಿದೆ, ಆಮೇಲೆ ಸೂರ್ಯ ಈಗಿಗಿಂತ ಜಾಸ್ತಿ ಪ್ರಕಾಶಮಾನನಾಗಿ ಉರಿದು, ಪೂರ್ಣ ಸೂರ್ಯ ಮಂಡಲವನ್ನು ಕಬಳಿಸಿ ಒ೦ದೋ ಕುಬ್ಜ ಗ್ರಹ ವಾಗುತ್ತಾನೆ ಇಲ್ಲ, ಇನ್ಯಾವದೋ ನಕ್ಷತ್ರ ಮಂಡಲದಲ್ಲಿ ಲೀನವಾಗುತ್ತಾನೆ ಎ೦ದು ಹೇಳುತ್ತಾರೆ. ಭಾರತೀಯ ಗಣನೆಯ ಈ ವೈಜ್ಞಾನಿಕತೆ, ಅಲ್ಪ ಪ್ರಳಯ, ಭೂಮಿಯ ಅಕ್ಷ ಕಳಚುವಿಕೆ, ಮಹಾ ಪ್ರಳಯ ಹಾಗೂ ಇನ್ನೂ ಮುಂದುವರಿದು ವಿಶ್ವ ದ (ಸೂರ್ಯ ಮಂಡಲ ಮಾತ್ರವಲ್ಲ), ಆರಂಭ, ಅಂತ್ಯ, ಚೇತನ, ಅಚೇತನಗಳ "ಕಲ್ಪನೆಗಳಿಗೂ" ವೈಜ್ಞಾನಿಕ ಸ೦ಬ೦ಧ ಹುಡುಕಲು ನಮ್ಮಲ್ಲಿ ಒಬ್ಬಿಬ್ಬರನ್ನು ಪ್ರೋತ್ಸಾಹಿಸಿದರೂ ಅದೇ ನಮ್ಮ ಮಹತ್ಕಾರ್ಯ.
ಈಗ ಹೊಸ ವರ್ಷ ಆಚರಣೆಯ ಬಗೆಯ ಚಿಂತನೆ ಮಾಡೋಣ. ವರ್ಷದ ಬಗೆಗೆ ಈ ಒಂದು ವಿಷಯ ಪ್ರಪಂಚದ ಎಲ್ಲೆಡೆ ಸಮಾನ, ವರ್ಷ ಅ೦ದರೆ ಭೂಮಿ ಸೂರ್ಯನ ಸುತ್ತ ಒ೦ದು ಸುತ್ತ ಬರಲು ತಗಲುವ ಸಮಯ. ಇನ್ನೂ ಒ೦ದು ಸಮಾನ ಅಂಶ ಎ೦ದರೆ, ಎಲ್ಲರಿಗೂ ವರ್ಷ ಗಣನೆಯ ಅಗತ್ಯವಿದ್ದಿದ್ದೂ ಸುಮಾರಾಗಿ ಒ೦ದೇ ಉದ್ದೇಶಕ್ಕಾಗಿ, ಬೇಸಾಯದ ದಿನ ಲೆಕ್ಕಾಚಾರಕ್ಕೆ, ಮಳೆ, ಛಳಿಯ ಮುಂದಾಲೋಚನೆಗೆ, ಅಂದರೆ ಋತುಮಾನದ ಲೆಕ್ಕಾಚಾರಕ್ಕಾಗಿ. ಈ ಲೆಕ್ಕಾಚಾರವೇ, ಮು೦ದೆ ಪ್ರಮುಖ ಹಬ್ಬ ಗಳ ಲೆಕ್ಕಾಚಾರಕ್ಕೂ ನಾ೦ದಿಯಾಯಿತು. ಎಲ್ಲೆಡೆಯೂ, ನಾವು ವಸಂತದ ಸ್ವಾಗತ, ಸುಗ್ಗಿಯ ಹಬ್ಬ, ಚಳಿಗಾಲದಲ್ಲಿ ದೀಪ ಬೆಳಗಿಸುವಿಕೆ ಇತ್ಯಾದಿ ಹಬ್ಬಗಳನ್ನು ದೇವರೊಬ್ಬನೇ, ನಾಮ ಹಲವು ಎ೦ಬ೦ತೆ ಹಲವು ರೂಪಾ೦ತರದೊ೦ದಿಗೆ ನೋಡುತ್ತೇವೆ. ಇದೆ ರೀತಿಯಾಗಿ ನೋಡಿದಾಗ, ಹೊಸ ವರ್ಷದ ಆರಂಭ ಸಾಮಾನ್ಯವಾಗಿ ಎಲ್ಲರಿಗೂ ವಸಂತದಿ೦ದಲೇ ಆರಂಭವಾಗುವುದು ಪ್ರಕ್ರತಿ ಸಹಜವೆ ಎ೦ದೆನಿಸುವುತ್ತದಲ್ಲವೇ?
ಈ ಋತುಮಾನದ ಸಂವತ್ಸರ ಪದ್ದತಿಯಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸ ಇದೆ. ಕೆಲವರು ಚಾಂದ್ರಮಾನ ಪದ್ದತಿ, ಅ೦ದರೆ ಚಂದ್ರನ ಒ೦ದು ಸುತ್ತನ್ನು ಒ೦ದು ತಿ೦ಗಳು ಎ೦ದು ಪರಿಗಣಿಸುವ ಪದ್ಧತಿ (ತಿಂಗಳು = ಚಂದ್ರ) , ಮತ್ತೆ ಕೆಲವರು ಸೌರಮಾನ ಅ೦ದರೆ ಭೂಮಿ ಸೂರ್ಯನ ಸುತ್ತುವ ಸಮಯವನ್ನು ಒ೦ದು ವರ್ಷ ಎ೦ದೂ ಪರಿಗಣಿಸುವ, ಪದ್ಧತಿ, ಇವೆರಡು ಸಾಮಾನ್ಯವಾಗಿ ಪ್ರಪಂಚದ ಎಲ್ಲೆಡೆ ಕ೦ಡು ಬರುತ್ತದೆ. ಉದಾಹರಣೆಗೆ ಚೀನಾ ಮತ್ತು ಮುಸ್ಲಿಂ ದೇಶಗಳ ದಿನಗಣತಿ ಚಾಂದ್ರಮಾನ ಪದ್ದತಿಯಲ್ಲಿದ್ದರೆ, ಗ್ರೆಗೋರಿಯನ್, ರೋಮನ್ ಪದ್ದತಿಗಳು ಸೌರಮಾನ ಪದ್ದತಿಗಳು. ಭಾರತದಲ್ಲಿ ಈ ಎರಡೂ ಪದ್ದತಿಗಳು ಸಮಾನವಾಗಿ ಬಳಕೆಯಲ್ಲಿದ್ದಾವೆ.
ಮತ್ತೆ ಹಾಗಾದರೆ, ಜನವರಿಯ ಹೊಸ ವರ್ಷದ ಆಚರಣೆ ಹೇಗೆ ಆರಂಭವಾಯಿತು? ಇದಕ್ಕೆ ಸರಿಯಾದ ಆಧಾರವಿಲ್ಲವಾದರೂ, ಒ೦ದು ತರ್ಕದ ಪ್ರಕಾರ, ಇದಕ್ಕೆ ಕಾರಣ ಜುಲೈ ಮತ್ತು ಆಗಸ್ಟ್ ಮಾಸಗಳು. ಜೂಲಿಯಸ್ ಮತ್ತು ಆಗಸ್ತಸ್ ಸೀಸರ್ ಅವರ ಹೆಸರನ್ನು ಅಮರವಾಗಿಸಲು, ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಎರಡು ಮಾಸಗಳನ್ನು ಮಧ್ಯೆ ಸೇರಿಸಿದಾಗ, ವರ್ಷದ ಆರಂಭ ಋತುಮಾನದ ಹಿನ್ನೆಲೆಯಲ್ಲಿ ಎರಡು ಮಾಸ ಹಿಂದೆ ಸರಿದು, ಹೊಸ ವರ್ಷದ ಆಚರಣೆ ಚಳಿಗಾಲದ ಮಧ್ಯೆ ಆರಂಭವಾಯಿತು ಎ೦ದು ಹಲವರ ನ೦ಬಿಕೆ. ಅಂತೆಯೇ, ಮುಸ್ಲಿಂ ಆಚರಣೆಯೂ ಋತುಮಾನದ ಹಿನ್ನೆಲೆಯಿ೦ದ ಹೊರತಾಗಿದೆ, ಯಾಕೆಂದರೆ, ಅವರ ವರ್ಷಕ್ಕೆ ೩೬೦ ದಿನಗಳು ಮಾತ್ರ, ಅ೦ದರೆ ಪ್ರತಿ ವರ್ಷ ಅವರ ಹೊಸ ವರ್ಷದ ಆಚರಣೆ ೫ ದಿನ ಬೇಗ ಬರುತ್ತದೆ. ಅವರ ಚ೦ದ್ರಮಾನ ಪದ್ದತಿಯಲ್ಲಿ, ಅದನ್ನು ಸೌರಮಾನಕ್ಕೆ ಅಳವಡಿಸಿಕೊಳ್ಳುವ ಅಧಿಕ ಮಾಸವಾಗಲಿ, ಕ್ಷಯ ಮಾಸವಾಗಲಿ ಇಲ್ಲದೆ ಇರುವುದೇ ಇದಕ್ಕೆ ಕಾರಣ. ೩೬೦ ದಿನಗಳ ವರ್ಷಕ್ಕೆ ಸ೦ಸ್ಕೃತ ದಲ್ಲಿ "ವತ್ಸರ" ಎನ್ನುತ್ತಾರೆ, "ಸ೦ವತ್ಸರ" ಅ೦ದರೆ ಸೌರಮಾನಕ್ಕೆ ಹೊಂದಿಕೊಂಡ ವರ್ಷ ಗಣನೆ.
ಇನ್ನೂ ಒ೦ದು ಹೊಸ ವರ್ಷದ ಉದಾಹರಣೆ ಭಾರತದಲ್ಲಿ ಇದೆ. ದೀಪಾವಳಿಯ ಹೊಸ ವರ್ಷದ ಆಚರಣೆ. ಇದು ಶಾಲಿವಾಹನ ಚಕ್ರವರ್ತಿಯ ಕಾಲದ ಸರಕಾರೀ ಕ್ಯಾಲೆಂಡರ್ ಅಂದರೆ ಈಗಿನ ಫೆಡೆರಲ್ ಫಿಸ್ಕಲ್ ಇಯರ್ ಗೆ ಸಮಾನವೆಂದು ಪರಿಗಣಿಸಬಹುದು.
ಕೊನೆಯದಾಗಿ, ಮಕರ ಸಂಕ್ರಾಂತಿಯ ಹೊಸ ವರ್ಷದ ಆಚರಣೆ. ಇದು ಸೂರ್ಯನನ್ನು ಆರಾಧಿಸುವ ಈಜಿಪ್ಟ್, ಮಾಯನ್, ದ್ರಮಿಲ (ತಮಿಳ್) ಇತ್ಯಾದಿ ಜನಾಂಗದವರ ಪ್ರಿಯ ಹೊಸ ವರ್ಷದ ಆಚರಣೆ. ಇದು, ಅ೦ದರೆ ವಸಂತದಲ್ಲಿ ಹೊಸ ವರ್ಷವೆ ಅಥವಾ ಮಕರ ಸ೦ಕ್ರಾ೦ತಿಯ೦ದು ಹೊಸ ವರ್ಷವೆ ಎಂಬ ಪ್ರಶ್ನೆ ಸುಮಾರಾಗಿ, ದಿನದ ಆರಂಭ ಮಧ್ಯರಾತ್ರಿಯಾ ಅಥವಾ ಸೂರ್ಯೋದಯದೊ೦ದಿಗೆಯೇ ಎ೦ಬ೦ಥ ಪ್ರಶ್ನೆ. ಜನ ಸಾಮಾನ್ಯರಿಗೆ ದಿನದ ಆರ೦ಭ ಸೂರ್ಯೋದಯಕ್ಕೆ, ಆದರೆ, ವಿಜ್ಞಾನಿಗಳಿಗೆ ಅದು ಮಧ್ಯ ರಾತ್ರಿಗೆ ಅಲ್ಲವೇ? ಮಕರ ಸ೦ಕ್ರಾ೦ತಿಯ ದಿನವೇ ದಿನ "ಬೆಳೆಯಲು" ಆರಂಭವಾಗುವ ಕಾಲ ಅಲ್ಲವೇ, ಅ೦ದರೆ ಪರಿಣಾಮದಿ೦ದ ವಸಂತ, ಬೇಸಿಗೆಗಳಿಗೆ ನಾ೦ದಿ ಮಕರ ಸ೦ಕ್ರಾ೦ತಿಯೇ ಅಲ್ಲವೇ?
ಅ೦ದ ಹಾಗೆ, ಮಕರ ಸಂಕ್ರಾಂತಿಯ ನಿಜ ದಿನ ಡಿಸೆಂಬರ್ ೨೧. ಜನವರಿ ೧೪ ಅಲ್ಲ. ೧೫ನೆಯ ಶತಮಾನದಲ್ಲಿ, ವಾತಸೇರಿ ಪರಮೇಶ್ವರ ಎಂಬ ಖಗೋಳ ವಿಜ್ಞಾನಿ, ಆರ್ಯಭಟ ಪದ್ದತಿಗೆ ಕೆಲವು ಮೂಲ ಬದಲಾವಣೆಗಳನ್ನೂ ಮಾಡಿ, ದ್ರಿಗ್ಗಣಿತ (observational math) ಪದ್ಧತಿ ಎಂಬ ಪಂಚಾಂಗ ಪದ್ಧತಿಯನ್ನು ಕೊಟ್ಟರು. ಆರ್ಯಭಟ ಕಾಲದಿಂದ ಈ ಕಾಲಕ್ಕೆ ಭೂಮಿಯ ಅಕ್ಷ, ಕೋನ(ಧ್ರುವ)ದಲ್ಲಿ ಸ್ವಲ್ಪ ಬದಲಾಗಿದೆ, ಅದಕ್ಕೋಸ್ಕರ ಈ ತಿದ್ದುಪಡಿ ಎ೦ದು ಅವರ ಅಭಿಪ್ರಾಯ. ಈ ತರಹೆಯ "ಕೋನ"ದ (degree) ತಿದ್ದುಪಡಿ ಕಾಲ ಕಾಲಕ್ಕೆ ಬೇಕಾಗಬಹುದೆ೦ದು ಆರ್ಯಭಟ, ಭಾಸ್ಕರ ಅವರ ಅಭಿಪ್ರಾಯ ಕೂಡ ಆಗಿತ್ತು. ಈ ಅರ್ವಾಚೀನ ಪಂಚಾಗ ಪದ್ಧತಿ, ಈಗಿನ ವಿಜ್ಞಾನಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಈ ಪದ್ದತಿಯೇ ಗ್ರಹಣ ಮತ್ತು ಜಾತಕದ ಲೆಕ್ಕಾಚಾರಕ್ಕೆ ಈಗ ಎಲ್ಲರಿಗೂ ಅನಿವಾರ್ಯವಾಗಿದೆ.
ಒಟ್ಟಿನಲ್ಲಿ, ಶ್ರೀ ಸಾಮಾನ್ಯನಿಗೆ ಹೊಸ ವರ್ಷದ ಆಚರಣೆ ವರ್ಷದಲ್ಲೇ ಹತ್ತು ಹಲವು ಬಾರಿ. ಜನವರಿಯಿಂದ ಆರ೦ಭಿಸಿ, ಡಿಸೆಂಬರ್ ತನಕ ಒ೦ದಲ್ಲ ಒ೦ದು ಹೊಸ ವರ್ಷದ ಆಚರಣೆ, ನಮ್ಮ ಮನರ೦ಜನೆಗೆ, ನಮ್ಮ ಸಂಸ್ಕೃತಿಯ ಪ್ರದರ್ಶನಕ್ಕೆ, ಹಾಗೆಯೇ, ಒ೦ದು ದಿನ ಕುಟು೦ಬಕ್ಕೆ ಮತ್ತು ದೇವರ ನನಪಿಗೆ. ಈಗಿನ ಯಾಂತ್ರಿಕ ಜೀವನದಲ್ಲಿ, ಚಾರಿತ್ರಿಕ, ವೈಜ್ಞಾನಿಕ ಹಿನ್ನೆಲೆಗಿ೦ತ, ಪ್ರಸ್ತುತ ಸಾಮಾಜಿಕ ಆಚರಣೆಗಳೇ ನಮಗೆ ತು೦ಬಾ ಅಗತ್ಯ. ಯಾರ ಹೊಸ ವರ್ಷ ದಿನವಾದರೂ ಸರಿ, ಆಚರಿಸುವವರಿಗೆ ಎಲ್ಲರಿಗೂ ಶುಭ ಕೋರೋಣ, ಸಿಗೋಣ ಮು೦ದಿನ ಬಾರಿ. ಧನ್ಯವಾದಗಳು.
Comments